ಭಕ್ಷಕಕಣ ಕಬಳಿಕೆ (ಜೀವಾಣು ಕಬಳಿಕೆ)

	ಜೀವಾಣುಗಳು ಅಥವಾ ಭಕ್ಷಕ ಕಣಗಳು ತಮ್ಮ ನೆರೆಯಲ್ಲಿರುವ ಜೈವಿಕ ಹಾಗೂ ಅಜೈವಿಕ ಕಣಗಳನ್ನು ಕಬಳಿಸಿ ಅಂತರ್ಗತ ಮಾಡಿಕೊಳ್ಳುವ ವಿಧಾನ (ಫೇಗೋಸೈಟೋಸಿಸ್). ಇಂಥ ಸಾಮಥ್ರ್ಯ ಪ್ರಾಣಿದೇಹದ ಕೆಲವು ಜೀವಾಣುಗಳಿಗೆ ಮಾತ್ರ ಉಂಟು. ಇವುಗಳಿಗೆ ಕಬಳಿಸುವ ಭಕ್ಷಕ ಕಣಗಳೆಂದು (ಫೇಗೋಸೈಟ್ಸ್) ಹೆಸರು. ಏಕಾಣುಜೀವಿಯಾದ ಅಮೀಬವೂ ಕಬಳಿಸುವ ಭಕ್ಷಕ ಕಣವೇ. ಅತ್ಯಲ್ಪ ವಿಕಾಸಿಗಳಾದ ಅಮೀಬ ಸ್ಪಾಂಜುಗಳಲ್ಲಿ ಭಕ್ಷಕ ಕಣ ಕಬಳಿಕೆ ಆಹಾರ ಪೂರೈಕೆಯ ಮಾರ್ಗ, ಮೇಲ್ದರ್ಜೆಯ ಪ್ರಾಣಿಗಳಲ್ಲಾದರೋ ಇದು ಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುವ ಒಂದು ಮುಖ್ಯ ವಿಧಾನ.

	ಫೇಗೋಸೈಟೋಸಿಸ್, ಫೇಗೋಸೈಟ್ ಎಂಬ ಪದಗಳನ್ನು ಸೃಷ್ಟಿಸಿದವ ರಷ್ಯದ ವೈದ್ಯ ಎಲೀ ಮೆಶ್ಚಿನಿಕಾಫ್ (1845-1916). ಈತನ ಕಂಪ್ಯಾರಟಿವ್ ಪೆಥಾಲಜಿ ಆಫ್ ಇನ್‍ಪ್ಲಮೇಷನ್ ಎಂಬ ಗ್ರಂಥದಲ್ಲಿ ಜೀವಾಣುಕಬಳಿಕೆ ವಿವಿಧ ಪ್ರಾಣವರ್ಗದಲ್ಲಿ ಹೇಗೆ ವಿಕಾಸಗೊಂಡಿದೆ ಎಂಬುದರ ವಿವರ ಇದೆ. ಪ್ರಾರಂಭದಲ್ಲಿ ಈ ಪದ ಆಹಾರ ಕಣಗಳ ಕಬಳಿಕೆಗೆ ಸೀಮಿತವಾಗಿತ್ತು. ತಮ್ಮ ಇರುವಿಕೆಯಿಂದ ಪೀಡನೆಯನ್ನು ಉಂಟು ಮಾಡುವ ಕಣಗಳು, ಮೃತಪ್ರಾಯವಾದ ಜೀವಾಣಗಳು ಹಾಗೂ ಅವುಗಳ ಅವಶೇಷಗಳು ಸೋಂಕಿನಿಂದ ದೇಹದ ಒಳಹೊಕ್ಕು ರೋಗವನ್ನು ಉಂಟು ಮಾಡುವ ವಿಷಾಣುಗಳು-ಇವುಗಳ ಕಬಳಿಕೆಗೂ ಈ ಪದ ಮುಂದಕ್ಕೆ ಅನ್ವಯವಾಯಿತು. ಕಬಳಿಸಿದ ಕಣಗಳನ್ನು ಈ ಜೀವಾಣುಗಳು ಜೀರ್ಣಿಸಿಕೊಂಡು ಬಿಡುತ್ತವೆ. ಜೀರ್ಣವಾಗದ ಕಣಗಳು ಪುನಃ ಹೊರಕ್ಕೆ ವಿಸರ್ಜಿತವಾಗುವುದು ಸಾಮಾನ್ಯ. ಹಾಗಾದರೆ ಬಹುಕಾಲ ಭಕ್ಷಕ ಜೀವಾಣುವಿನೊಳಗೇ ಅಡಕವಾಗಿಯೂ ಇರಬಹುದು. ಜೀರ್ಣವಾಗದ ವಿಷಾಣುಗಳು ಕಬಳಿಸುವ ಭಕ್ಷಕ ಜೀವಾಣುವಿನೊಳಗೆ ವೃದ್ಧಿಸಿ ಕೊನೆಗೆ ಈ ಭಕ್ಷಕ ಜೀವಾಣುಗಳನ್ನೇ ಆಹುತಿ ತೆಗೆದುಕೊಳ್ಳುವುದೂ ಉಂಟು. ಅಲ್ಲದೆ ರಕ್ತ ಪರಿಚಲನೆಯಿಂದ ಬೇರೆ ಸ್ಥಳಕ್ಕೆ ಒಯ್ಯಲ್ಪಟ್ಟು ವಿಷಾಣು ಸೋಂಕು ಅಲ್ಲಿಗೂ ವ್ಯಾಪಿಸಬಹುದಾಗಿದೆ. ವಿಷಮಶೀತಜ್ವರ, ಕ್ಷಯ, ಟುಲರೀಮಿಯ, ಬ್ರೂಸೆಲ್ಲೋಸಿಸ್ ಮುಂತಾದ ರೋಗಗಳ ಕಾರಕ ವಿಷಾಣುಗಳು ಈ ರೀತಿ ದೇಹದ ನಾನಾಕಡೆಗೂ ವ್ಯಾಪಿಸುತ್ತವೆಂದು ತಿಳಿದುಬಂದಿದೆ. ಈ ವಿಷಾಣುಗಳ ಕಬಳಿಸುವ ಭಕ್ಷಕ ಕಣಗಳೊಳಗೇ ಇರುವುದರಿಂದ ರಕ್ತದಲ್ಲಿರುವ ಪ್ರತಿರೋಧಕ ವಸ್ತುಗಳಿಂದ ರಕ್ಷಿಸಲ್ಪಟ್ಟು ಸೋಂಕು ವ್ಯಾಪನೆಗೆ ಹಾದಿ ಸುಗುಮವಾದಂತಾಗಿದೆ. ಭಕ್ಷಕ ಕಣಕಬಳಿಕೆಯಲ್ಲಿ ಇದೊಂದು ನ್ಯೂನತೆ.

	ಕಬಳಿಸುವ ಜೀವಾಣುಗಳಲ್ಲಿ ಎರಡು ವಿಧ. ಸಣ್ಣವು ಮೈಕ್ರೊಫೇಜಸ್, ದೊಡ್ಡವು ಮ್ಯಾಕ್ರೋಫೇಜಸ್, ಈ ಹೆಸರುಗಳೂ ಮೆಶ್ಚಿನಿಕಾಫನ ಸೃಷ್ಟಿ. ಸಣ್ಣವು ಫಾಲಿಮಾರ್ಫ್‍ಗಳೆಂಬ (ಈಗ ಇವನ್ನು ನ್ಯೂಟ್ರೋಫಿಲ್‍ಗಳೆಂದು ಕರೆಯುತ್ತಾರೆ. ಒಂದು ಬಗೆ ಬಿಳಿರಕ್ತಕಣಗಳೇ ಎಂದು ಮೆಶ್ಚಿನಿಕಾಫನ ವ್ಯಾಸಂಗ ದಿಂದ ವಿಶದವಾಗಿದೆ. ವಿಷಾಣುಗಳ ಸೋಂಕಿನಿಂದ ಉರಿ ಊತಗೊಂಡ ಸ್ಥಳದಲ್ಲಿ ರಕ್ತಪ್ರವಾಹ ಹೆಚ್ಚುವುದೂ ರಕ್ತದಲ್ಲಿನ ಪಾಲಿಮಾರ್ಫ್‍ಗಳು ಲೋಮನಾಳಗಳ ಭಿತ್ತಿಯನ್ನು ತೂರಿ ಹೊರಬಂದು ಅಲ್ಲಿ ಅಸಂಖ್ಯಾತವಾಗಿ ಘೇರಾಯಿಸುವುದೂ ಅನಂತರ ಸನಿಹದಲ್ಲಿರುವ ವಿಷಾಣುಗಳನ್ನು ಕಬಳಿಸುವುದೂ ಕಬಳಿಸಿದ ವಿಷಾಣುಗಳನ್ನು ಜೀರ್ಣಿಸಿಕೊಳ್ಳುವುದೂ ಜೀರ್ಣವಾಗದೆ ಆಗಾಧಸಂಖ್ಯೆಯಲ್ಲಿ ವಿಷಾಣುಗಳು ಅಂತರ್ಗತವಾಗಿ ಅವುಗಳ ಕೈಮೇಲಾಗಿದ್ದರೆ ಅವೇ ಪಾಲಿಮಾರ್ಫನ್ನು ನಾಶ ಮಾಡುವುದೂ ಮುಂತಾದ ಎಲ್ಲ ವಿವರಗಳನ್ನೂ ಈ ವ್ಯಾಸಂಗದಿಂದ ತಿಳಿಯಬಹುದಾಗಿದೆ. ಕಬಳಿಸುವ ದೊಡ್ಡ ಜೀವಾಣುಗಳು (ಮ್ಯಾಕ್ರೋಫೇಜಸ್) ಸಣ್ಣವಕ್ಕಿಂತ ಎರಡು ಮೂರು ಪಟ್ಟು ಗಾತ್ರದವಾಗಿರುತ್ತವೆ. ದೇಹದ ಅಂಗಗಳಲ್ಲೆಲ್ಲ ಒಂಟೊಂಟಿಯಾಗಿ ಮುಖ್ಯವಾಗಿ ಪುಪ್ಪುಸ, ಯಕೃತ್ತು, ಗುಲ್ಮ, ದುಗ್ಧರಸ ಗ್ರಂಥಿಗಳು, ಮಜ್ಜೆ ಇವುಗಳಲ್ಲಿ ನೆಲೆಸಿರುತ್ತವೆ. ದೇಹದೊಳಗಿನ ಕೊಳಚೆ ಕಣಗಳನ್ನು ಕಬಳಿಸಿ ನಿರ್ಮಲೀಕರಿಸುವುದು ಇವುಗಳ ಮುಖ್ಯ ಕಾರ್ಯ. ಬಂಧನಾಂಗಾಂಶಗಳಲ್ಲಿರುವ (ಕನೆಕ್ಟಿವ್ ಟಿಶ್ಯೂಸ್) ಈ ಮಾದರಿಯ ಕಣಗಳು ಇದ್ದ ಜಾಗದಿಂದ ಕಳಚಿಕೊಂಡು ರಕ್ತನಾಳವನ್ನು ಸೇರಿ ಬೇರೆಡೆಗೆ ಒಯ್ಯಲ್ಪಟ್ಟು ಅಲ್ಲಿ ನೆಲೆಸುವುದೂ ಅಲ್ಲಿಂದ ಪುನಃ ಬೇರೆಡೆ ನೆಲೆಸುವುದೂ ಸಾಮಾನ್ಯ. ರಕ್ತದ ಮಾನೋಸೈಟುಗಳೆಂಬ ಬಿಳೀ ಕಣಗಳು ಬಹುಶಃ ಇವೇ ಅಥವಾ ಇವುಗಳಂಥ ಕಾರ್ಯಭಾರ ಉಳ್ಳವೇ. ಉಸಿರಿನ ಮೂಲಕ ದೇಹದೊಳಹೋಗುವ ದೂಳು, ಇಂಗಾಲ ಇತ್ಯಾದಿ. ಕಣಗಳನ್ನು ಫುಪ್ಪುಸದಲ್ಲಿರುವ ಈ ಮಾದರಿಯ ಜೀವಾಣುಗಳು ಕಬಳಿಸುವುದರಿಂದ ಇವುಗಳಲ್ಲಿ ಆಯಾ ಕಣಗಳು ಅಡಕವಾಗಿರುವುದು ಕಂಡುಬರುತ್ತದೆ. ಪಟ್ಟಣವಾಸಿಗಳಲ್ಲಿ ಈ ರೀತಿ ದೂಳು ಕಣಗಳು ಅಡಕವಾಗಿರುವುದನ್ನೂ ಕಲ್ನಾರು ಉದ್ಯೋಗದಲ್ಲಿ ಇರುವವರಲ್ಲಿ ನಾರಿನಂತಿರುವ ಕಣಗಳು ಅಡಕವಾಗಿರುವುದನ್ನೂ (ಆಸ್‍ಬೆಸ್ಟೋಸಿಸ್) ಕಲ್ಲಿದ್ದಲಿನ ಗಣಿ ಕೆಲಸಗಾರರಲ್ಲಿ ಇಂಗಾಲದ ಕಣಗಳು ಅಡಕವಾಗಿರುವುದನ್ನೂ (ಆಂಥ್ರಕೋಸಿಸ್) ಚಿನ್ನದ ಗಣಿ ಕೆಲಸಗಾರರಲ್ಲಿ, ಕಲ್ಲು ಕುಟಿಕರಲ್ಲಿ ಶಿಲಾಕಣಗಳು ಅಡಕವಾಗಿರುವುದನ್ನೂ (ಸಿಲಿಕೋಸಿಸ್) ನೋಡಬಹುದು. ದೇಹದೊಳಗೇ ನಿರಂತರವಾಗಿ ಸಂಚಯವಾಗುವ ಮೃತಜೀವಾಣುಗಳ ಹಾಗೂ ಅಂಗಾಂಶಗಳ ಅವಶೇಷಗಳನ್ನೂ ಇವು ಕಬಳಿಸುವವು. ಆದರೆ ಆಯಸ್ಸು ತೀರಿದ ಬಳಿಕ ಛಿದ್ರಗೊಂಡ ಕೆಂಪುಕಣಗಳ ಅವಶೇಷಗಳ ನಿರ್ಮೂಲನ ಯಕೃತ್ತು, ಗುಲ್ಮಗಳಲ್ಲಿ ನೆಲೆಸಿರುವ ಈ ಮಾದರಿಯ ಜೀವಾಣುಗಳ ವಿಶಿಷ್ಟ ಕ್ರಿಯೆ. ಜೀವಾಣುವಿಗಿಂತ ಅದು ಕಬಳಿಸಬೇಕಾದ ವಸ್ತುವಿನ ಗಾತ್ರ ಹೆಚ್ಚಾಗಿದ್ದರೆ ನಾಲ್ಕಾರು ಜೀವಾಣುಗಳು ಒಂದಕ್ಕೊಂದು ಜಂಟಿಸಿ ಮಿಲವಾಗಿ ಒಂದು ದೈತ್ಯಜೀವಾಣುಗಳ (ಜಯಂಟ್ ಸೆಲ್) ಸೃಷ್ಟಿಗೊಳ್ಳುತ್ತದೆ. ಇಂಥ ದೈತ್ಯಜೀವಾಣುಗಳು ವಜ್ರ್ಯವಸ್ತುವಿನ ಗಾತ್ರ ಎಷ್ಟಾದರೂ ಕ್ರಮೇಣವಾಗಿ ಕಬಳಿಸಿ ದೇಹವನ್ನು ನಿರ್ಮಲೀಕರಿಸಬಲ್ಲವು.

	ಕಬಳಿಸುವ ಜೀವಾಣುಗಳಿಗೆ ಅಮೀಬದಂತೆ ಚಲಿಸುವ ಸಾಮಥ್ರ್ಯವಿರುವುದರಿಂದ ಜೀವಾಣು ಕಬಳಿಕೆ ಸಾಧ್ಯ. ಭಕ್ಷಕ ಕಣ, ವಿಶಿಷ್ಟ ರಾಸಾಯನಿಕ ಆಕರ್ಷಣೆಯಿಂದ (ಕೀಮೊಟ್ಯಾಕ್ಸಿನ್) ಕಣದ ಸನಿಹಕ್ಕೆ ಚಲಿಸಿ ಅದನ್ನು ಸಂಪರ್ಕಿಸಿತ್ತದೆ. ಕಣ ಸಣ್ಣದಾಗಿದ್ದರೆ ಜೀವಾಣುವಿನಲ್ಲಿ ಸಂಪರ್ಕಸ್ಥಳದಲ್ಲಿ ಒಂದು ಗುಳಿ ಉಂಟಾಗಿ ಅದು ಕಣವನ್ನು ಹುದುಗಿಸಿಕೊಳ್ಳುವುದು. ಕ್ಷಣ ಮಾತ್ರದಲ್ಲಿ ಗುಳಿಯ ಕಂಠ ಜಿಗುಟಿಕೊಂಡು ಜೀವಾಣುವಿನೊಡನೊಡನೆ ಸೇರಿಹೋಗುತ್ತದೆ. ಈ ಕಾರ್ಯ ಮಿಂಚಿನ ವೇಗದಲ್ಲಿ ಜರುಗಿ ಈ ಕ್ಷಣ ಹೊರಗೆ ಇರುವ ಕಣ ಮರುಕ್ಷಣದಲ್ಲೇ ಭಕ್ಷಕ ಕಣವಿನೊಳಗೆ ಕಾಣಿಸಿಕೊಳ್ಳುತ್ತದೆ. ಇದೊಂದು ಆಶ್ಚರ್ಯಕರ ಘಟನೆ. ಕಣ ದೊಡ್ಡದಾಗಿದ್ದರೆ, ಕಣದ ಎರಡು ಪಾಶ್ರ್ವಗಳಲ್ಲೂ ಜೀವಾಣು, ಹುಸಿಪಾದಗಳನ್ನು (ಸೂಡೋಪೋಡಿಯಮ್) ಪಸರಿಸಿ ಅದನ್ನು ಆವರಿಸಿಕೊಳ್ಳುತ್ತದೆ. ಎರಡು ಕಡೆಯ ಹಸಿಪಾದಗಳೂ ಸಂಧಿಸಿ ಮಿಲನವಾಗಿ ಕಬಳಿಕೆ ಅಂತ್ಯಗೊಳ್ಳುವುದು. ನುಣುಪಾಗಿಲ್ಲದ ಸ್ಥಳದಲ್ಲಿ ಕಬಳಿಕೆ ಸುಲಭ. ಸ್ಥಳ ನುಣುಪಾಗಿದ್ದರೆ ಭಕ್ಷಕ ಕಣವನ್ನು ಮುಂದುಮುಂದಕ್ಕೆ ತಳ್ಳುತ್ತ ಕೊನೆಗೆ ಏನಾದರೂ ಅಡ್ಡಬಂದು ಕಣ ನುಣುಚಿಕೊಳ್ಳಲಾರದೆ ಸಿಕ್ಕಿಕೊಂಡಾಗ ಕಬಳಿಸಿಬಿಡುತ್ತದೆ. ವಿಷಾಣುಗಳ ವಿಚಾರದಲ್ಲಿ, ಅವು ಉಗ್ರವಾಗಿಲ್ಲದಿದ್ದರೆ ಕಬಳಿಕೆ ಸುಲಭ. ಉಗ್ರವಿಷಾಣುಗಳ ಮೇಲ್ಮೆಯು ಕಬಳಿಕೆಗೆ ನಿರುತ್ತೇಜಕವೆಂದು ತಿಳಿದುಬಂದಿದೆ. ಆದರೆ ಇಂಥ ವಿಷಾಣುಗಳಿಂದ ಅಲ್ಪ ಸೋಂಕುಂಟಾದಾಗ ಪ್ರತಿರೋಧಕ ವಸ್ತುಗಳು (ಆ್ಯಂಟಿಬಾಡೀಸ್) ದೇಹದಲ್ಲಿ ಉತ್ಪತ್ತಿ ಆಗುವಂತೆಯೇ ಆಪ್ಸೋನಿನ್‍ಗಳೆಂಬ ವಸ್ತುಗಳೂ ಉತ್ಪತ್ತಿಯಾಗುವುವು. ಆಪ್ಸೋನಿನ್‍ಗಳು ಉಗ್ರ ವಿಷಾಣುಗಳ ಕಬಳಿಕೆಯನ್ನು ಉತ್ತೇಜಿಸುವಂಥವು.

	ಕಬಳಿಕೆಗೆ ದ್ರವಮಾಧ್ಯಮದಲ್ಲೇ ಇರುವ ಜೀವಾಣು. ಅದೇ ದ್ರವಮಾದ್ಯಮದಲ್ಲಿರುವ ಕಣವನ್ನು ಸಂಪರ್ಕಿಸಬೇಕು. ಅಂದರೆ ಕಣಕ್ಕೂ ದ್ರವಕ್ಕೂ ಇರುವ ಸಂಬಂಧ ಕಡಿಮೆ ಆಗಿ ಕಣಕ್ಕೂ ಜೀವಾಣುವಿಗೂ ಸಂಪರ್ಕಾನುಕೂಲತೆ ಹೆಚ್ಚಬೇಕು. ಬಹುಶಃ ಉಗ್ರವಿಷಾಣುಗಳ ಮೇಲೆ ಆಪ್ಸೋನಿನ್ನುಗಳ ಪ್ರಭಾವ ಈ ರೀತಿ ವರ್ತಿಸುವಂಥದ್ದು ಎಂದು ವಾದಿಸಲಾಗಿದೆ. ಇಂಥ ಅಭಿಪ್ರಾಯಗಳನ್ನು ಸಮರ್ಥಿಸಲು ಅಜೈವಿಕ ಪ್ರತಿರೂಪಗಳನ್ನು ತಯಾರಿಸಿ ಅಭ್ಯಸಿಸಿದ್ದಾರೆ. ಒಂದು ಪಾತ್ರೆಯಲ್ಲಿ ನೀರಿಟ್ಟು ಅದರೊಳಗೆ ಒಂದು ತೊಟ್ಟು ಕ್ಲೋರೊಫಾರಮ್ಮನ್ನು ಬಿಡುವುದು, ಕ್ಲೋರೋಫಾರಮ್ ತೊಟ್ಟಿನ ಸನಿಹದಲ್ಲಿ ಒಂದು ಗಾಜಿನ ಎಳೆಯ (ಗ್ಲಾಸ್ ವೂಲ್) ಸಣ್ಣ ಚೂರನ್ನು ಇಡುವುದು. ಗಾಜು ಮತ್ತು ಕ್ಲೋರಾಫಾರಮ್ ಕಣ ಜೀವಾಣುಗಳನ್ನು ಪ್ರತೀಕಿಸುತ್ತವೆ. ಗಾಜು, ನೀರಿನ ಸಂಬಂಧ ಕಣ ಕ್ಲೋರೋಫಾರಮ್ಮುಗಳೆರಡೂ ಯಥಾಸ್ಥಾನದಲ್ಲಿರುತ್ತವೆ. ಆದರೆ ಗಾಜಿನ ಕಣವನ್ನು ಶೆಲ್ಲಾಕ್ ಎಂಬ ರಾಳದಲ್ಲಿ ಅದ್ದಿ ಇಟ್ಟರೆ ಆಗ ಕ್ಲೋರೊಫಾರಮ್ಮಿನೊಡನೆ ಸಂಪರ್ಕಾನುಕೂಲತೆ ಹೆಚ್ಚಿ ಕ್ಲೋರೊಫಾರಮ್ ನಿಧಾನವಾಗಿ ಗಾಜಿನ ಕಣದ ಸುತ್ತ ಹರಡಿಕೊಳ್ಳುತ್ತ ಕೊನೆಗೆ ಕಣ ಕ್ಲೋರೊಫಾರಮ್ ಬಿಂದುವಿನಲ್ಲಿ ಅಂತರ್ಗತವಾಗುತ್ತದೆ. ಇಲ್ಲಿ ಕಣದ ಮೈಮೇಲಿರುವ ಶೆಲ್ಲಾಕ್ ಕ್ಲೋರೊಫಾರಮ್ಮಿನಲ್ಲಿ ಕ್ರಮೇಣ ಕರಗಿ ಹೋಗುತ್ತದೆ. ಇದನ್ನು ಭಕ್ಷಕ ಕಣವಿನಲ್ಲಿ ಜರಗುವ ಜೀರ್ಣಕಾರ್ಯಕ್ಕೆ ಹೋಲಿಸಬಹುದು. ಶೆಲ್ಲಾಕ್ ಎಲ್ಲ ಕರಗಿ ಹೋದ ಬಳಿಕ ಉಳಿಯುವ ಗಾಜಿನ ಕಣ ಪುನಃ ಕ್ಲೋರೊಫಾರಮ್ ಬಿಂದುವಿನಿಂದ ಹೊರಬರುತ್ತದೆ. ಇದನ್ನು ಜೀರ್ಣವಾಗದ ಕಣಗಳ ವಿಸರ್ಜನೆಗೆ ಹೋಲಿಸಿದ್ದಾರೆ. ಸ್ಥೂಲವಾಗಿ ಇಂಥ ಹೋಲಿಕೆಯನ್ನು ತೋರುವ ಪ್ರತಿರೂಪಗಳನ್ನು ಸೃಷ್ಟಿಸಿ ವಾದ ಮಂಡಿಸಬಹುದೇ ಹೊರತು ನಿಜವಾಗಿ ಜೀವಾಣುಕಬಳಿಕೆ ಇನ್ನೂ ಜಟಿಲವಾದ ಹಾಗೂ ಪೂರ್ಣವಾಗಿ ಅರ್ಥವಾಗಿರದ ಜೈವಿಚಟುವಟಿಕೆ.

ಜೀವಾಣು ಕಬಳಿಕೆಯನ್ನು ಬಳಸಿಕೊಂಡು ಕಬಳಿಸುವ ಭಕ್ಷಕ ಕಣಗಳು ದೇಹದಲ್ಲಿ ಎಲ್ಲೆಲ್ಲಿ ಇವೆ ಮತ್ತು ಏನು ಕೆಲಸ ಮಾಡುತ್ತವೆ ಎಂದು ಅಭ್ಯಸಿಸಿದ್ದಾರೆ. ಟ್ರಿಪಾನ್ ಬ್ಲೂ, ಇಂಡಿಯನ್ ಇಂಕ್ ಮುಂತಾದ ನಿರುಪದ್ರವೀ ವರ್ಣವಸ್ತುಗಳ ಅತಿ ತೆಳುವಾದ ದ್ರಾವಣವನ್ನು ಸೂಜಿಮದ್ದಿನ ಮೂಲಕ್ಕೆ ಸ್ವಲ್ಪ ಪರಿಮಾಣದಲ್ಲಿ ರಕ್ತಗತವಾಗಿಸಿದರೆ ಅದು ರಕ್ತದೊಡನೆ ಮಿಲನವಾಗಿ ದೇಹದಲ್ಲೆಲ್ಲ ವ್ಯಾಪಿಸುತ್ತದೆ. ವರ್ಣವಸ್ತು ಎಲ್ಲೆಲ್ಲೂ ಅತ್ಯಲ್ಪ ಪರಿಮಾಣದಲ್ಲಿರುವುದರಿಂದ ದೇಹದ ಯಾವ ಅಂಗಾಂಶವೂ ವರ್ಣೀಕೃತವಾಗಿರುವುದಿಲ್ಲ. ಆದರೆ ಶೀಘ್ರದಲ್ಲೇ ಕಬಳಿಸುವ ಭಕ್ಷಕ ಕಣಗಳು ತಮ್ಮ ನೆರೆಯಲ್ಲಿರುವ ವರ್ಣವಸ್ತುವಿನ ಕಣಗಳನ್ನು ಕಬಳಿಸಿ ತಮ್ಮೊಳಗೆ ಅಡಕಿಕೊಳ್ಳುವುದರಿಂದ ಇಂಥ ಕಣಗಳಿಗೆ ಬಣ್ಣ ಕೊಟ್ಟಂತಾಗಿ ಅವುಗಳು ಎದ್ದು ಕಾಣುವಂತಾಗುತ್ತದೆ. ಅಲ್ಲದೆ ಅತ್ಯಧಿಕವಾಗಿ ಕಣ ಶೇಖರಣೆ ಆದರೆ ಈ ಜೀವಾಣುಗಳ ಸಹಜಕಾರ್ಯಕ್ಕೆ ಅಡ್ಡಿಯಾಗಿ ದೇಹಕ್ರಿಯೆಯಲ್ಲಿ ಏರುಪೇರುಂಟಾಗುವುದೆಂಬುದನ್ನೂ ನಾವು ನಿರೀಕ್ಷಿಸಬಹುದು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ